- ಸೌಮ್ಯ, ಶಾಂತಮ್ಮ, ಬಾಬು ರೆಡ್ಡಿ ಮತ್ತು ಶಶಿರಾಜ್ – ಸಾರ್ವತ್ರಿಕ ಆರೋಗ್ಯ ಆಂದೋಲನ, ಕರ್ನಾಟಕ
“ರಾಜ್ಯ ಸರ್ಕಾರವು ಬಡವರ ಜೀವನದ ಮೇಲೆ ಆಟವಾಡುತ್ತಿದೆ. ಜನರಿಗೆ ಸರ್ಕಾರಿ ಆಸ್ಪತ್ರೆಗಳಿಂದ ಸಿಗುವ ಸೌಲಭ್ಯಗಳನ್ನು ಕಸಿಯುವ ಮೂಲಕ ಬಡವರ ಬದುಕನ್ನು ದುರ್ಬಲಗೊಳಿಸುವ ಕೆಲಸ ಮಾಡಲಾಗುತ್ತಿದೆ. ಖಾಸಗೀಕರಣ ಬೇಡವೇ ಬೇಡ. ಸರ್ಕಾರಿ ಆಸ್ಪತ್ರೆಗಳು ಉಳಿಯಬೇಕು.”
ಚಿನ್ನಮ್ಮ ರೈತ ಸಂಘದ ಪ್ರತಿನಿಧಿ

ಕಳೆದ ಹಲವಾರು ವರ್ಷಗಳಿಂದ, ಕರ್ನಾಟಕ ಸರ್ಕಾರಗಳು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಹೆಸರಿನಲ್ಲಿ ಜಿಲ್ಲಾಸ್ಪತ್ರೆಗಳನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸುವುದಾಗಿ ಪದೇ ಪದೇ ಘೋಷಣೆ ಮಾಡಿವೆ. 2022 ರಲ್ಲಿ, ಹಿಂದಿನ ರಾಜ್ಯ ಸರ್ಕಾರವು ಒಂಬತ್ತು ಜಿಲ್ಲಾಸ್ಪತ್ರೆಗಳನ್ನು PPP ಆಧಾರಿತ ಖಾಸಗೀಕರಣಕ್ಕೆ ಮುಂದಾಗಿತ್ತು. ಈ ನಿರ್ಧಾರಕ್ಕೆ ಜನರ ಭಾರೀ ವಿರೋಧ ಮತ್ತು ಪ್ರತಿಭಟನೆ ಇದ್ದು ಸರ್ಕಾರವು ಈ ನಿರ್ಧಾರವನ್ನು ಹಿಂಪಡೆಯಬೇಕಾಯಿತು. ಆದರೆ ಈಗಿನ ರಾಜ್ಯ ಸರ್ಕಾರವು 11 ಜಿಲ್ಲೆಗಳ ಜಿಲ್ಲಾಸ್ಪತ್ರೆಗಳನ್ನು ಖಾಸಗೀಕರಣಗೊಳಿಸಲು ಮತ್ತೆ PPP ಯೋಜನೆಗಳನ್ನು ಮುಂದಿಟ್ಟಿದೆ — ತುಮಕೂರು, ದಾವಣಗೆರೆ, ಚಿತ್ರದುರ್ಗ, ಬಾಗಲಕೋಟೆ, ಕೋಲಾರ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ವಿಜಯಪುರ, ವಿಜಯನಗರ ಮತ್ತು ರಾಮನಗರ. ಈ PPP ಮೂಲಕದ ಖಾಸಗೀಕರಣಕ್ಕೆ “ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕ” ನೇತೃತ್ವದ ವ್ಯಾಪಕ ಜನಾಂದೋಲನದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಜಿಲ್ಲಾ ಆಸ್ಪತ್ರೆಗಳನ್ನು ಖಾಸಗೀಕರಣಗೊಳಿಸಲು ಪ್ರಸ್ತಾಪಿಸಲಾಗಿರುವ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿ ಏನು?
- ಸರ್ಕಾರಗಳು ಖಾಸಗಿ ಸಂಸ್ಥೆಗಳಿಗೆ ಮೆಡಿಕಲ್ ಕಾಲೇಜು ಕಟ್ಟಲು ಅತೀ ಕಡಿಮೆ ಬೆಲೆಯಲ್ಲಿ ಜಮೀನನ್ನು ಕೊಡುವುದು ಅಥವಾ ಧೀರ್ಘಕಾಲೀನ ಭೋಗ್ಯಕ್ಕೆ ಕೊಡುವುದು. ಉದಾ. ಮಾರುಕಟ್ಟೆ ಬೆಲೆಯ ಕೇವಲ 8% ನ ಬೆಲೆಗೆ 99 ವರ್ಷಗಳಿಗೆ ಧೀರ್ಘಕಾಲೀನ ಭೋಗ್ಯಕ್ಕೆ ಕೊಡುವುದು.
- ಸರ್ಕಾರಿ ಜಿಲ್ಲಾ ಆಸ್ಪತ್ರೆಗಳನ್ನು ಖಾಸಗಿ ಸಂಸ್ಥೆಗೆ ಹಸ್ತಾಂತರಿಸಿ ಅವುಗಳು ಅದನ್ನು ನಡೆಸುವ ಮತ್ತು ನಿರ್ವಹಣೆ ಮಾಡುವ ಸಂಪೂರ್ಣ ಅಧಿಕಾರವನ್ನು ನೀಡುವುದು.
- ಖಾಸಗಿ ಸಂಸ್ಥೆಯು ಜಿಲ್ಲಾ ಆಸ್ಪತ್ರೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬಹುದು ಹಾಗೂ ಸಾಧಾರಣವಾಗಿ ಇದಕ್ಕೂ ಸರ್ಕಾರದಿಂದ ದೇಣಿಗೆ ಪಡೆಯಬಹುದು.
- ಆದರೆ, ಖಾಸಗಿ ಸಂಸ್ಥೆಗೆ ಹಸ್ತಾಂತರ ಮಾಡುವಾಗ, ಆ ಸಂಸ್ಥೆ ವೈದ್ಯಕೀಯ ತಾಂತ್ರಿಕ ಅನುಭವ, ಕುಶಲತೆ ಇರುವುದನ್ನು ಸಾಬೀತು ಪಡಿಸಬೇಕಿಲ್ಲ ಬದಲಿಗೆ ಯಾವ ಸಂಸ್ಥೆ ಟೆಂಡರ್ ಸಮಯದಲ್ಲಿ ಆಸ್ಪತ್ರೆ ಅಭಿವೃದ್ಧಿಗೆ ಅತೀ ಕಡಿಮೆ ಬೆಲೆಯನ್ನು ಉಲ್ಲೇಖಿಸುವುದೋ ಆ ಸಂಸ್ಥೆಗೆ ಕಾಂಟ್ರಾಕ್ಟ್ ನೀಡಲಾಗುವುದು. ಈ ಹಿಂದೆ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ಕೊಟ್ಟ ಉದಾಹರಣೆಗಳಿವೆ. ಉದಾ. ಗುಜರಾತ್ ನಲ್ಲಿ ಜಿ.ಕೆ. ಜನರಲ್ ಆಸ್ಪತ್ರೆಯನ್ನು 2009 ಅದಾನಿ ಕಂಪನಿಗೆ ಹಸ್ತಾಂತರಿಸಲಾಗಿತ್ತು.
ರಾಜ್ಯಗಳು PPP ನೀತಿಯನ್ನು ಜಾರಿಗೆ ತರುತ್ತಿರುವುದಕ್ಕೆ ಮತ್ತೊಂದು ಮುಖ್ಯ ಕಾರಣ 2019ರ NITI ಆಯೋಗದ PPP ಮಾದರಿಯಲ್ಲಿ ಆಸ್ಪತ್ರೆಗಳನ್ನು ನಡೆಸಲು ಹೊರಡಿಸಿದ ಒಂದು ನೀತಿ ಪತ್ರ. NITI ಆಯೋಗದ ಪ್ರಕಾರ “ಸಂಪನ್ಮೂಲಗಳ ಕೊರತೆಯ ಕಾರಣ ಕೇಂದ್ರದ ಒಕ್ಕೂಟ/ರಾಜ್ಯ ಸರ್ಕಾರಗಳು ಎಂದಿಗೂ ಅವಶ್ಯಕತೆಗೆ ತಕ್ಕ ಹಾಗೆ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸುವುದು ಸಾಧ್ಯವಿಲ್ಲ” ಎಂದು. ಹಾಗಾಗಿ PPP ಮಾದರಿಯಲ್ಲಿ ಖಾಸಗಿ ಸಂಸ್ಥೆಗಳೊಡನೆ ಸಹಭಾಗಿತ್ವ ಮಾಡಿಕೊಂಡು ಕಾಲೇಜುಗಳನ್ನು ತೆರೆಯಬೇಕು ಎಂದು ಹೇಳಿದೆ. ಆದರೆ ವಾಸ್ತವ ಏನೆಂದರೆ ಕೇಂದ್ರದ ಒಕ್ಕೂಟ/ರಾಜ್ಯ ಸರ್ಕಾರಗಳು ನಿರಂತರವಾಗಿ ಆರೋಗ್ಯ ಕ್ಷೇತ್ರವನ್ನು ಕಡೆಗಣಿಸಿರುವುದು ಹಾಗೂ ಆರೋಗ್ಯ ಕ್ಷೇತ್ರಕ್ಕೆ ಕಡಿಮೆ ಹಣ ಹೂಡಿಕೆ ಮಾಡಿರುವುದು. ಉದಾ. ರಾಷ್ಟ್ರೀಯ ಆರೋಗ್ಯ ನೀತಿಯು ರಾಜ್ಯಗಳು ತಮ್ಮ ಬಜೆಟ್ ನ ಕನಿಷ್ಠ 8% ಹಣವನ್ನು ಆರೋಗ್ಯ ಕ್ಷೇತ್ರಕ್ಕೆ ಮುಡಿಪಿಡಬೇಕು ಎಂದು ಹೇಳುತ್ತದೆ, ಆದರೆ ಕರ್ನಾಟಕ ಸರ್ಕಾರ ಕೇವಲ 4% ಅಷ್ಟು ಮಾತ್ರ ಮೀಸಲಿಟ್ಟಿದೆ (ಅದೇ ಸಮಯ ಕೇಂದ್ರದ ಒಕ್ಕೂಟ ಸರ್ಕಾರದ ಹೂಡಿಕೆಯೂ ಸಹ ಕೇವಲ 6.4% ಮಾತ್ರ ಇದೆ) ಯಾವುದು ಬಹಳ ಅಸಮರ್ಪಕ. ಆದುದರಿಂದ ವೈದ್ಯಕೀಯ ಶಿಕ್ಷಣ ವಿಸ್ತರಣೆಗೆ ಪರಿಹಾರವೆಂದರೆ, ಸಾರ್ವಜನಿಕ ಆರೋಗ್ಯ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸುವುದು ಹಾಗೂ ಹೆಚ್ಚು ಸಾರ್ವಜನಿಕ ವೈದ್ಯಕೀಯ ಕಾಲೇಜುಗಳನ್ನು (ಈಗಿನ ಜಿಲ್ಲಾಸ್ಪತ್ರೆಗಳಿಗೆ ಲಗತ್ತಾಗಿ) ಪ್ರಾರಂಭಿಸುವುದು ಆಗಬೇಕೇ ವಿನಃ ಈ ಮಹತ್ವದ ಸಾರ್ವಜನಿಕ ಸಂಸ್ಥೆಗಳನ್ನು ವಾಣಿಜ್ಯ ಉದ್ದೇಶದ ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸುವುದಲ್ಲ.
PPP ಯೋಜನೆಗಳ ಪರಿಣಾಮವಾಗಿ ಬಡ ರೋಗಿಗಳು ಎದುರಿಸುವ ಗಂಭೀರ ಸಮಸ್ಯೆಗಳು ಹೀಗಿವೆ:
- ರೋಗಿಗಳನ್ನು ಮತ್ತು ಹಾಸಿಗೆಗಳನ್ನು “ಹಣ ನೀಡುವ ರೋಗಿಗಳು” ಮತ್ತು “ಉಚಿತ ರೋಗಿಗಳು” ಎಂದು ವಿಂಗಡಿಸಲಾಗುವುದು. ಖಾಸಗಿ ಸಂಸ್ಥೆಯು ಉಚಿತ ರೋಗಿಗಳಿಗೆ ಚಿಕಿತ್ಸೆಯನ್ನು ಉಚಿತವಾಗಿ ಕೊಡಬೇಕು ಮತ್ತು ಹಣ ನೀಡುವ ರೋಗಿಗಳಿಂದ ಮಾರುಕಟ್ಟೆ ದರದ ಆಧಾರದ ಮೇಲೆ ತಮ್ಮ ಲಾಭಕ್ಕನುಗುಣವಾಗಿ ಹಣ ಪಡೆಯಬಹುದು. ಈ ಪರಿಸ್ಥಿತಿಯಲ್ಲಿ ಲಾಭದ ದೃಷ್ಟಿಯಿಂದ ಉಚಿತ ರೋಗಿಗಳಿಗೆ ಬೆಡ್ ಖಾಲಿ ಇಲ್ಲ ಎಂದು ನಿರಾಕರಿಸಬಹುದು.
- ಉಚಿತ ರೋಗಿಗಳ ಮೇಲೆ ಉಚಿತ ಚಿಕಿತ್ಸೆ ಪಡೆಯಲು ಕಾಗದಪತ್ರದ ತೊಂದರೆಗಳು ಹೆಚ್ಚುತ್ತವೆ. ವಿವಿಧ ದಾಖಲಾತಿಗಳನ್ನು (BPL ಕಾರ್ಡ್ ಇತ್ಯಾದಿ) ಹೊಂದಿಸುವ ಹೊರೆ ಇರುವುದು ಹಾಗೂ ಸಮಯಕ್ಕೆ ಸರಿಯಾಗಿ ಆರೋಗ್ಯ ಸೇವೆಯನ್ನು ಪಡೆಯುವ ಬದಲು ದಾಖಲೆಗಳನ್ನು ಹೊಂದಿಸುವುದಕ್ಕಾಗಿ ಅಲೆದಾಡಬೇಕಾಗಬಹುದು.
- ವಿವಿಧ ತಪಾಸಣೆಗಳು ಉಚಿತವಿಲ್ಲದಿರಬಹುದು ಹಾಗೂ ಅದಕ್ಕೆ ಹಚ್ಚಿನ ದರ ನಿಗಧಿಯಾಗಿರಬಹುದು. ಇದು ಬಡ ಜನರಿಗೆ ಅತ್ಯಧಿಕ ಹೊರೆಯಾಗುವುದು. ಇದಲ್ಲದೇ ಕೆಲವೊಂದು ಯೋಜನೆಗಳಲ್ಲಿ ರೋಗಿಗಳು ಮೊದಲು ಹಣ ಪಾವತಿಸಿ ನಂತರ ದಾಖಲಾತಿಗಳನ್ನು ಸಲ್ಲಿಸಿ ಆಡಳಿತದಿಂದ ಮರುಪಾವತಿ ಪಡೆಯಬೇಕು. ಆದರೆ ಇದು ಬಹುಪಾಲು ಯಾವುದೋ ಕಾರಣಕ್ಕೆ (ಉದಾ. ದಾಖಲಾತಿ ಸರಿ ಇಲ್ಲದಿರುವುದು) ನಿರಾಕರಣೆ ಆಗಿರುವ ಸಂದರ್ಭಗಳ ಬಗ್ಗೆ ಅಧ್ಯಯನಗಳು ಇವೆ.
- ಚಿಕಿತ್ಸೆಯ ನಿರಾಕರಣೆ: ಸಾಧಾರಣವಾಗಿ ಉಚಿತ ರೋಗಿಗಳ ಚಿಕಿತ್ಸೆ ನಿರಾಕರಣೆಗೆ ಅವಕಾಶವಿರುವುದಿಲ್ಲ. ಆದರೆ ಖಾಸಗಿ ಸಂಸ್ಥೆಗಳು “ಉಚಿತ ಬೆಡ್” ಗಳು ಖಾಲಿ ಇಲ್ಲವೆಂದು ನೆಪ ಹೇಳಿ ನಿರಾಕರಿಸಿದಲ್ಲಿ ರೋಗಿಗಳು ಪರದಾಡಬೇಕಾಗುವುದು ಹಾಗೂ ಉಚಿತವಲ್ಲದ ದುಬಾರಿ ಬೆಡ್ ಗಳಿಗೆ ಹಣ ತೆರುವ ಪರಿಸ್ಥಿತಿ ಬರುವುದು.
- ಇತರೆ ಸೇವೆಗಳು: ಖಾಸಗಿಯಲ್ಲಿ ಕ್ಯಾಂಟೀನ್, ವಾಹನ ಸೌಲಭ್ಯ, ಉಳಿದುಕೊಳ್ಳುವ ವ್ಯವಸ್ಥೆ ಇತ್ಯಾದಿ ಇತರೆ ಸೇವೆಗಳು ಉಚಿತವಿರುವುದಿಲ್ಲ. ಅದೂ ಅಲ್ಲದೇ ಉಚಿತ ರೋಗಿಗಳಿಗೆ ಆಹಾರ ಉಚಿತವಾಗಿ ದೊರೆಯುವುದಾ ಎನ್ನುವುದು ಸ್ಪಷ್ಟ ಪಡಿಸಿಲ್ಲ.
- ಇದಲ್ಲದೇ ಖಾಸಗಿಯವರು ಹಣ ನೀಡುವ ರೋಗಿಗಳಿಂದ ಸಂದ ಹಣವನ್ನು ಉಚಿತ ರೋಗಿಗಳಿಗೆ ವ್ಯಯ ಮಾಡುತ್ತಾರೆಂದೇನಿಲ್ಲ. ಖಾಸಗಿಯವರು ಆಯುಷ್ಮಾನ್ ಭಾರತ್ (AB-Ark) ನಂತಹ ವಿಮೆ ಯೋಜನೆಗಳನ್ನು ಉಪಯೋಗಿಸಿ, ಸರ್ಕಾರದಿಂದ ಹಣದ ಮರುಪಾವತಿ ಮಾಡಿಸಿಕೊಳ್ಳುವರು.
ಹಾಗಾಗಿ ಈ ರೀತಿಯ PPPಗಳ ಮೂಲಕ ಸರ್ಕಾರಗಳು ಜಿಲ್ಲಾ ಆಸ್ಪತ್ರೆಗಳನ್ನೂ ಕೊಟ್ಟು, ಆಸ್ಪತ್ರೆಯ ಅಭಿವೃದ್ಧಿಗೂ ಹಣ ನೀಡಿ ಮತ್ತು ಉಚಿತ ರೋಗಿಗಳ ಚಿಕಿತ್ಸೆಯ ಹಣವನ್ನು ವಿಮೆಯ ಮೂಲಕ ಮರುಪಾವತಿ ಮಾಡಿ ಕಾರ್ಪೊರೇಟ್ ಗಳು ಲಾಭ ಮಾಡಿಕೊಳ್ಳಲು ಸುಗಮ ದಾರಿ ಮಾಡಿಕೊಡುತ್ತವೆ. ದುರದೃಷ್ಟವಶಾತ್, ಅಧಿಕಾರಕ್ಕೆ ಬಂದಿರುವ ಯಾವುದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೂ, ಸಾರ್ವಜನಿಕ ಹಿತಾಸಕ್ತಿಗೆ ಹಾನಿ ಮಾಡುವ ಈ ರೀತಿಯ ನೀತಿಗಳನ್ನು ಮುಂದುವರಿಸಿದ್ದೇ ಇವೆ. ಈ PPP ಮಾದರಿಗಳು ಪರಿಣಾಮಕಾರಿಯಾಗಿವೆ ಎಂಬ ಯಾವುದೇ ಬಲವಾದ ಪುರಾವೆ ಇರದಿದ್ದರೂ ಸಹ, ನವ-ಉದಾರವಾದ (neoliberal) ತತ್ವಗಳ ಆಧಾರಿತ ಧೋರಣೆಗಳಿಂದ ಇಂತಹ ನೀತಿಗಳನ್ನು ಅಳವಡಿಸಿಕೊಂಡು ಬರುತ್ತಿವೆ.
PPP ಗಳು ಪಾರಿಣಾಮಕಾರಿಯಾಗಿರುವುದಕ್ಕೆ ಯಾವುದೇ ಪುರಾವೆ ಇಲ್ಲ. – ಕರ್ನಾಟಕದಲ್ಲಿ ರಾಯಚೂರಿನ OPEC ಆಸ್ಪತ್ರೆಯನ್ನು ಸರ್ಕಾರ ಕಟ್ಟಿ, ಅದರ ನಿರ್ವಹಣೆಯನ್ನು PPP ಒಡಂಬಡಿಕೆಯ ಮೂಲಕ ಅಪೋಲೊ ಸಂಸ್ಥೆಗೆ ಒಪ್ಪಿಸಿತು. ಆದರೆ 10 ವರ್ಷಗಳ ನಂತರ ಆರೋಗ್ಯ ಇಲಾಖೆ ನಡೆಸಿದ ಅಧ್ಯಯನದಲ್ಲಿ ಅಪೋಲೊ ಒಪ್ಪಂದದ ಹಲವಾರು ಷರತ್ತುಗಳನ್ನು ಉಲ್ಲಂಘಿಸಿತ್ತು ಮತ್ತು ಅದರ ನಿರ್ವಹಣೆಯನ್ನು ತಾನೇ ವಹಿಸಿಕೊಂಡಿತು. – ಉಡುಪಿಯ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯನ್ನೂ ಸಹ PPP ಮೂಲಕ ಖಾಸಗಿ ಸಂಸ್ಥೆಗೆ ವಹಿಸಿಕೊಡಲಾಯಿತು. ಅದನ್ನು ಖಾಸಗಿ ಸಂಸ್ಥೆ ನಡೆಸಲಾಗದೆ, ಅದನ್ನು ಆರೋಗ್ಯ ಇಲಾಖೆಯೇ ಮತ್ತೆ ಹಿಂತೆಗೆದುಕೊಳ್ಳಬೇಕಾಯಿತು. – “ಆರೋಗ್ಯ ಬಂಧು’ ಯೋಜನೆಯಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸರ್ಕಾರೇತರ ಹಾಗೂ ಖಾಸಗಿ ಸಂಸ್ಥೆಗಳಿಗೆ ನಡೆಸಲು ಕಾಂಟ್ರಾಕ್ಟ್ ನೀಡಿದ್ದು, ಆದರೆ ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ಯಾವುದೇ ಪುರಾವೆ ಇಲ್ಲದ ಕಾರಣ ಪದೇ ಪದೇ ಇದನ್ನು ರದ್ದು ಪಡಿಸುವುದು, ಜಾರಿಗೆ ತರುವುದು ನಡೆದಿದೆ. – ಕರ್ನಾಟಕದಲ್ಲಿ ಕ್ಯಾನ್ಸರ್ ಚಿಕಿತ್ಸೆ ಕೇಂದ್ರಗಳನ್ನು ನಡೆಸಲು (2019–2023) ನಾರಾಯಣ ಹೆಲ್ತ್ ಭಾಗವಹಿಸಿದ್ದ ಪ್ರಮುಖ PPP ಯೋಜನೆಯಲ್ಲಿ, ಸರ್ಕಾರದಿಂದ ದೊಡ್ಡ ಪ್ರಮಾಣದ ಹೂಡಿಕೆಯಿದ್ದರೂ ಸಹ, ಸಿಬ್ಬಂದಿಯ ಕೊರತೆ, ವೈದ್ಯಕೀಯ ಸಲಕರಣೆಗಳ ಅಭಾವ, ಹಾಗೂ ಗ್ರಾಮೀಣ ಪ್ರದೇಶಗಳ ನಿರ್ಲಕ್ಷ ದಿಂದ ಉಂಟಾದ ಸಂಕಷ್ಟ. |
ಖಾಸಗೀಕರಣದ ವಿರುದ್ಧದ ರಾಜ್ಯವ್ಯಾಪಿ ಉದಯೋನ್ಮುಖ ಆಂದೋಲನ
ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕ (SAAK) ಸಂಘಟನೆಯು ನೇತೃತ್ವ ವಹಿಸಿ ರಾಜ್ಯದಾದ್ಯಂತ ಇರುವ ಗಾರ್ಮೆಂಟ್ ಸಂಘಗಳು, ಅಸಂಘಟಿತ ಕ್ಷೇತ್ರದ ಕಾರ್ಮಿಕರು, ದಲಿತ ಸಂಘಟನೆಗಳು, ಲೈಂಗಿಕ ಮತ್ತು ಲಿಂಗತ್ವ ಅಲ್ಪಸಂಖ್ಯಾತರ, ರೈತ ಚಳವಳಿಗಳು ಹಾಗೂ ಇತರ ಪ್ರಗತಿಶೀಲ ಚಳವಳಿಗಳೊಂದಿಗೆ ಸಂಪರ್ಕ ಸಾಧಿಸಿ, PPP ಮಾದರಿಯೊಂದಿಗೆ ಪ್ರಸ್ತಾಪಿತ ಖಾಸಗೀಕರಣದ ಅಪಾಯಗಳನ್ನು ಎತ್ತಿಹಿಡಿದು ಅದನ್ನು ವಿರೋಧಿಸಲು ಎಲ್ಲರ ಸಹಭಾಗಿತ್ವ ಕೊರಿ ಒಂದು ಅಪೀಲು ಕಳುಹಿಸಿತು. ಈ ಚಳವಳಿಗಳಿಗೆ, ಅವರು ಪ್ರತಿನಿಧಿಸುತ್ತಿರುವ ಅಂಚಿನಲ್ಲಿರುವ ಸಮುದಾಯಗಳಿಗೆ ಕರ್ನಾಟಕ ಸರ್ಕಾರದ ಈ ಕ್ರಮದಿಂದ ಆರೋಗ್ಯ ಸೇವೆಗಳ ಲಭ್ಯತೆಯ ಮೇಲೆ ಗಂಭೀರ ಪ್ರಮಾಣದ ಧಕ್ಕೆ ಉಂಟಾಗಲಿದೆ ಎಂಬ ವಿಷಯವನ್ನು ಒತ್ತಿ ಹೇಳಲಾಯಿತು.
2025ರ ಮೇ 17ರಂದು ಈ ಎಲ್ಲಾ ಸಂಘಟನೆಗಳೊಂದಿಗೆ ಒಂದು ಆನ್‌ಲೈನ್ ಸಭೆ ನಡೆಯಿತು, ಅಲ್ಲಿ ವಿಷಯದ ಬಗ್ಗೆ ಪರಿಚಯಾತ್ಮಕ ಮಾಹಿತಿ ನೀಡಲಾಯಿತು ಮತ್ತು ‘ಕರ್ನಾಟಕದ ಜಿಲ್ಲಾಸ್ಪತ್ರೆಗಳ ಖಾಸಗೀಕರಣ (PPP) ವಿರೋಧಿ ಅಭಿಯಾನ’ ಎಂಬ ಹೆಸರಿನಲ್ಲಿ ರಾಜ್ಯಾದ್ಯಂತ ಹೋರಾಟವನ್ನು ನಡೆಸಲು ನಿರ್ಧರಿಸಲಾಯಿತು. 2025–26ನೇ ಸಾಲಿನ ಕರ್ನಾಟಕ ರಾಜ್ಯದ ಬಜೆಟ್‍ನಲ್ಲಿ ಮೊದಲನೆಯದಾಗಿ ಕೋಲಾರ ಜಿಲ್ಲಾ ಆಸ್ಪತ್ರೆಗೆ ಈ ವರ್ಷ PPP ಮಾದರಿಯ ಮೂಲಕ ಖಾಸಗಿ ವೈದ್ಯಕೀಯ ಕಾಲೇಜಿಗೆ ಜಿಲ್ಲಾ ಆಸ್ಪತ್ರೆಯನ್ನು ಹಸ್ತಾಂತರಿಸಲಾಗುತ್ತದೆ ಎಂಬ ಉಲ್ಲೇಖವಿರುವ ಹಿನ್ನೆಲೆಯಲ್ಲಿ, ಈ ಅಭಿಯಾನವು ಕೋಲಾರದಿಂದಲೇ ಆಂದೋಲನ ಆರಂಭಿಸುವ ನಿರ್ಧಾರ ಕೈಗೊಂಡಿತು. 2025ರ ಜೂನ್ 6ರಂದು ಕೋಲಾರದಲ್ಲಿ ಒಂದು ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧಾರ ಮಾಡಲಾಯಿತು.
ಕೋಲಾರ ಪ್ರತಿಭಟನೆ – ವ್ಯಾಪಕ ಪ್ರಚಾರ ಮತ್ತು ಜಾಗೃತಿ, ಅಧಿಕಾರಿಗಳಿಗೆ ಜನರು ಸ್ಪಷ್ಟ ಸಂದೇಶ ನೀಡುತ್ತಾರೆ
“ಆರೋಗ್ಯ ನಮ್ಮೆಲ್ಲರ ಹಕ್ಕು, ಎಲ್ಲರಿಗೂ ಉಚಿತ ಆರೋಗ್ಯ ಸಿಗಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರಗಳು ಕೆಲಸ ಮಾಡಬೇಕು. ನಮಗೆ ಸರ್ಕಾರದ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜು ಬೇಕು, ಖಾಸಗಿಯವರ ಹಂಗು ನಮಗೆ ಬೇಡ.”
ಶಾಂತಮ್ಮ, ಮಹಿಳಾ ಪರ ಹೋರಾಟಗಾರರು, ಕೋಲಾರ

ಕೋಲಾರ ಜಿಲ್ಲೆಯ ಸಾರ್ವಜನಿಕ ಜಿಲ್ಲಾಸ್ಪತ್ರೆಯನ್ನು ಖಾಸಗೀಕರಣ ಮಾಡುವ ನಿರ್ಧಾರವನ್ನು ಖಂಡಿಸಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿ ಆಂದೋಲನದ ವತಿಯಿಂದ 2025ರ ಜೂನ್ 6ರಂದು ಕೋಲಾರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಈ ಸಮಯದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರತಿನಿಧಿಗಳು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತ, ಕಾರ್ಮಿಕ, ಮಹಿಳಾ, ಮಾನವ ಹಕ್ಕುಗಳು, ದಲಿತ, ಕಾರ್ಮಿಕ, ಲೈಂಗಿಕ ಮತ್ತು ಲಿಂಗತ್ವ ಅಲ್ಪಸಂಖ್ಯಾತರು, ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ನಗರದ ಪತ್ರಕರ್ತರ ಭವನದಿಂದ ಮೆರವಣಿಗೆಯನ್ನು ಆರಂಭಿಸಿ ನಗರದ ಎಸ್ ಎನ್ ಆರ್ ಆಸ್ಪತ್ರೆಯ ತನಕ ಜಾಥವನ್ನು ನಡೆಸಲಾಯಿತು. ಈ ಸಮಯದಲ್ಲಿ ಸರ್ಕಾರದಿಂದ ಆಸ್ಪತ್ರೆಗಳ ಖಾಸಗೀಕರಣ ಬೇಡ ಎಂಬುವ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸಹ ಅಲ್ಲಿ ನೆರೆದಿದ್ದ ರೋಗಿಗಳಿಗೆ, ಕುಟುಂಬದವರಿಗೆ, ಆಸ್ಪತ್ರೆ ಸಿಬ್ಬಂದಿಗೆ ಮತ್ತಿತರಿಗೆ ಸರ್ಕಾರದ ನೀತಿಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಜಾಗರೂಕತೆಯನ್ನು ಮೂಡಿಸಲು ಒಂದು ಸಭೆಯನ್ನು ನಡೆಸಲಾಯಿತು.
“ಸರ್ಕಾರಿ ಆಸ್ಪತ್ರೆಗಳು ಇರುವುದರಿಂದಲೇ ನಾವು ನಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಮತ್ತು ಕಾಪಾಡಿಕೊಳ್ಳಲು ಸಾಧ್ಯವಾಗಿದೆ. ಪ್ರೈವೇಟ್ ಆಸ್ಪತ್ರೆಗಳಿಂದ ನಮಗೆ ಯಾವುದೇ ರೀತಿಯ ಪ್ರಯೋಜನ ಇಲ್ಲ. ದುಡ್ಡು ಇದ್ದವರಿಗೆ ಮಾತ್ರ ಅಲ್ಲಿ ಚಿಕಿತ್ಸೆ ಸಿಗುತ್ತದೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ತೋರಿಸಿಕೊಂಡರೆ ನಮಗೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಸಿಗುತ್ತದೆ.”
ನಾರಾಯಣಸ್ವಾಮಿ, ಬಳ್ಳಿ ಬಳಗ ಕೃಷಿಕರ ವೇದಿಕೆ – ಚಿಂತಾಮಣಿ
“ಸರ್ಕಾರಿ ಆಸ್ಪತ್ರೆಗಳು ಬಡವರ ಜೀವಾಳ. ಅವುಗಳನ್ನು ಉಳಿಸಬೇಕಿರುವುದು ಸರ್ಕಾರದ ಕರ್ತವ್ಯ. ಅದರ ಬದಲಿಗೆ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿಯವರಿಗೆ ಒಪ್ಪಿಸುವ ಮೂಲಕ ಬಡವರ ಜೀವನದ ಮೇಲೆ ಆಟವಾಡಲು ಸರ್ಕಾರ ಮುಂದಾಗಿರುವುದು ಸರಿಯಲ್ಲ. ಎಲ್ಲಾ ಜಿಲ್ಲಾಸ್ಪತ್ರೆಗಳನ್ನು ಉಳಿಸಬೇಕು ಹಾಗೂ ಅದಕ್ಕೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು.”
ಶಶಿರಾಜ್ ಹರತಲೆ, ಕವಿ ಹಾಗೂ ಸಾಮಾಜಿಕ ಕಾರ್ಯಕರ್ತ
“ಸಂಕಷ್ಟದಲ್ಲಿರುವ, ಬಡವರಿಗೆ ಸರ್ಕಾರಿ ಆರೋಗ್ಯ ಸೇವೆಯ ಅಗತ್ಯವು ಬಹಳಷ್ಟಿದೆ. ಇಂತಹ ಒಂದು ವ್ಯವಸ್ಥೆಯನ್ನು ನಾಶ ಮಾಡಿ, ಅದನ್ನು ಖಾಸಗೀಯವರಿಗೆ ಒಪ್ಪಿಸಲು ಮುಂದಾಗಿದ್ದು, ಇದು ಬಡವರ ಆರೋಗ್ಯದ ಹಕ್ಕನ್ನು ಕಸಿದಂತಾಗುತ್ತದೆ. ಸರ್ಕಾರವೇ ಜನರ ಕತ್ತು ಹಿಸುಕಿ ಸಾಯಿಸಿದಂತಾಗುತ್ತದೆ. ಹೀಗಾಗಿ, ಎಲ್ಲಾ ಜಿಲ್ಲಾಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಬೇಕು ಹಾಗೂ ಬಡವರಿಗೆ ಉಚಿತ ಆರೋಗ್ಯ ಸಿಗುವಂತಾಗಬೇಕು.”
ಬಾಬುರೆಡ್ಡಿ, ಯುವಜನ ಕಾರ್ಯಕರ್ತರು
ಜಿಲ್ಲಾ ಸರ್ಜನ್ ಜಗದೀಶ್ ಅವರ ಪರವಾಗಿ ಜಿಲ್ಲಾ ಆಸ್ಪತ್ರೆಯ ವೈದ್ಯರಾದ ಡಾ.ಶಾಂತಮ್ಮ ಅವರಿಗೆ ಮನವಿ ಪತ್ರವನ್ನು ಸಲ್ಲಿಕೆ ಮಾಡಲಾಯಿತು. ಬಳಿಕ ರಾಜ್ಯದ ವಿವಿಧ ಕಡೆಯಿಂದ ಬಂದಿರುವ ಪ್ರತಿನಿಧಿಗಳು ಹಾಗೂ ಸ್ಥಳೀಯ ಪ್ರತಿನಿಧಿಗಳನ್ನು ಒಳಗೊಂಡ ತಂಡಗಳು ಜಿಲ್ಲಾಧಿಕಾರಿ ರವಿ, ಜಿಲ್ಲಾ ಆರೋಗ್ಯಾಧಿಕಾರಿ ಶ್ರೀನಿವಾಸ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರಗಳನ್ನು ಸಲ್ಲಿಕೆ ಮಾಡಲಾಯಿತು. ಸ್ಥಳೀಯ ಪ್ರಿಂಟ್ ಮತ್ತು ಆನ್ ಲೈನ್ ಮಾಧ್ಯಮಗಳಲ್ಲಿ ಸಹ ವ್ಯಾಪಕವಾಗಿ ಪ್ರಸಾರವಾಯಿತು.
“ಕೋಲಾರ ಜಿಲ್ಲಾಸ್ಪತ್ರೆಯ ಖಾಸಗೀಕರಣದ ಕುರಿತು ನಮಗೆ ಮಾಹಿತಿ ಇಲ್ಲ. ನಾವು ಈ ವಿಚಾರವನ್ನು ಸರ್ಕಾರದ ಮಟ್ಟಕ್ಕೆ ತಲುಪಿಸುವ ಕೆಲಸ ಮಾಡುತ್ತೇವೆ. ಈ ಮನವಿಯನ್ನು ಸರ್ಕಾರಕ್ಕೆ ತಲುಪಿಸುವ ಕೆಲಸವನ್ನು ಮಾಡುತ್ತೇವೆ.”
ಡಾ.ಶಾಂತಮ್ಮ, ಜಿಲ್ಲಾ ಆಸ್ಪತ್ರೆಯ ವೈದ್ಯರು

“ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣದ ಕುರಿತು ಸರ್ಕಾರದ ಜೊತೆಗೆ ಸಭೆಯಲ್ಲಿ ಮಾತನಾಡುತ್ತೇವೆ. ನೀವು ನೀಡಿರುವ ಮನವಿಯನ್ನು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ”.
ರವಿ, ಜಿಲ್ಲಾಧಿಕಾರಿ

ಆನಂತರ, 2025ರ ಜುಲೈ 5ರಂದು, ಸುವರ್ಣ ನ್ಯೂಸ್ ಟಿವಿ ಚಾನಲ್ ಆಯೋಜಿಸಿದ್ದ ರಾಜ್ಯ ಆರೋಗ್ಯ ಸಚಿವರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಭಾಗವಹಿಸಿ PPP ಯೋಜನೆಗಳ ಬಗ್ಗೆ ಸಚಿವರನ್ನು ಪ್ರಶ್ನಿಸಿದರು. ಈ ಕುರಿತು ಸಚಿವರು ತನ್ನ ಸಹಜ ಪ್ರತಿಕ್ರಿಯೆಯಲ್ಲಿ ಮತ್ತೆ ಹೇಳಿದ ಮಾತು ಹೀಗಿತ್ತು: “PPP ಎಂದರೆ ಖಾಸಗೀಕರಣವಲ್ಲ, ಈ ವ್ಯವಸ್ಥೆಗಳಿಂದ ಜನರಿಗೆ ಉತ್ತಮ ಸೌಕರ್ಯಗಳು, ಸಿಬ್ಬಂದಿ ಮತ್ತು ಸೇವೆಗಳು ಲಭಿಸಲಿದೆ.”
ಆದರೆ ಈ ಹಿಂದೆ ರಾಜ್ಯದಲ್ಲಿ ರಾಯಚೂರಿನ OPEC ಆಸ್ಪತ್ರೆಯ PPP ವಿರುದ್ಧದ ಹೋರಾಟದ ಮತ್ತು ಸರ್ಕಾರವು ಮತ್ತೆ ಅದನ್ನು ತಾನೇ ನಡೆಸಲು ತೆಗೆದುಕೊಂಡ ಯಶಸ್ಸಿನಿಂದ (ಕೆಳಗೆ ನೋಡಿ) ಪ್ರೇರಣೆಯನ್ನು ಹೊಂದಿ ರಾಜ್ಯದಲ್ಲಿ ಹೋರಾಟ ಮುಂದುವರೆಯಲಿದೆ…
ಮತ್ತೆ ಸರ್ಕಾರಿ ತೆಕ್ಕೆಗೆ: ವೈಫಲ್ಯಗೊಂಡ PPP ಆಸ್ಪತ್ರೆ ಮತ್ತು ರಾಯಚೂರಿನ ಪುನರ್-ರಾಷ್ಟ್ರೀಕರಣ
ರಾಯಚೂರಿನಲ್ಲಿ OPEC ಸಹಾಯದಿಂದ ಸ್ಥಾಪಿತವಾಗಿದ್ದ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು (RGSH), 2002ರಲ್ಲಿ PPP ಮಾದರಿಯಲ್ಲಿ ಅಪೋಲೊ ಆಸ್ಪತ್ರೆಗಳಿಗೆ ಹಸ್ತಾಂತರಿಸಲಾಯಿತು, ಉದ್ದೇಶವು ಉನ್ನತ ತೃತೀಯ ಮಟ್ಟದ ಚಿಕಿತ್ಸೆಯನ್ನು ಒದಗಿಸುವುದಾಗಿತ್ತು. ಆದರೆ, ನಂತರ ನಡೆದ ಪರಿಶೀಲನೆಗಳಲ್ಲಿ ಗಂಭೀರ ಕೊರತೆಗಳು ಬಹಿರಂಗವಾಯಿತು. 350 ಹಾಸಿಗೆಗಳ ಸಾಮರ್ಥ್ಯವಿದ್ದರೂ, ಕೇವಲ 154 ಹಾಸಿಗೆಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಒಪ್ಪಂದದ ಪ್ರಕಾರ 140 ಹಾಸಿಗೆಗಳನ್ನು ಬಿಪಿಎಲ್ (ಬಡರೇಖೆಗಿಂತ ಕೆಳಗಿನ) ರೋಗಿಗಳಿಗೆ ಮೀಸಲಿರಿಸಬೇಕಿತ್ತು, ಆದರೆ ಕೇವಲ 40 ಹಾಸಿಗೆಗಳನ್ನು ಮಾತ್ರ ಅವರಿಗೆ ಮೀಸಲಿಡಲಾಗಿತ್ತು. ಬಿಪಿಎಲ್ ರೋಗಿಗಳಿಗೆ ಉದ್ದೇಶಿತ ಸೇವೆಗಳನ್ನು ಸರಿಯಾಗಿ ಬಳಸಿಕೊಳ್ಳಲಾಗಲಿಲ್ಲ — ಆ ಪ್ರದೇಶದಲ್ಲಿ ಬಹುಪಾಲು ಜನರು ಬಿಪಿಎಲ್ ಆಗಿದ್ದರೂ ಸಹ, ಒಳರೋಗಿಗಳಲ್ಲಿ ಕೇವಲ 25% ಮತ್ತು ಹೊರರೋಗಿಗಳಲ್ಲಿ ಕೇವಲ 15% ಜನರು ಬಿಪಿಎಲ್ ವರ್ಗದವರಾಗಿದ್ದರು. ಒಪ್ಪಂದದ ಮುಖ್ಯ ಷರತ್ತುಗಳಲ್ಲಿ ಒಂದಾಗಿದ್ದ ನಫ್ರೋಲಜಿ ಮತ್ತು ಗ್ಯಾಸ್ಟ್ರೋಎಂಟೆರೋಲಜಿ ಸೇವೆಗಳ ಒದಗಿಸುವಿಕೆ ಕೂಡ ನೆರವೇರಿಸಲ್ಪಟ್ಟಿರಲಿಲ್ಲ. ಅಪೋಲೊ ಆಸ್ಪತ್ರೆಗಳು ಒಂದು ದಶಕ ನಡೆಸಿದರೂ ಲಾಭಗಳಿಸುವಲ್ಲಿ ವಿಫಲವಾಗಿದ್ದವು ಮತ್ತು ಸರ್ಕಾರವೇ ಆರ್ಥಿಕ ನಷ್ಟಗಳನ್ನು ಭರಿಸಬೇಕಿತ್ತು. ಈ ಅನುಭವವು ಇಂತಹ PPP ಮಾದರಿಗಳು ಸಮತೆಯ ಆಯಾಮದಲ್ಲೂ ಅಥವಾ ದಕ್ಷತೆಯ ಆಯಾಮದಲ್ಲೂ ಹೇಗೆ ವಿಫಲವಾಗುತ್ತವೆ ಎಂಬುದನ್ನು ಬಹಿರಂಗಪಡಿಸಿತು — ಬಡ ಜನತೆಗೆ ಬೇಕಾದ ಸೇವೆ ಲಭಿಸದೆ, ಸಾರ್ವಜನಿಕ ಹಣ ಪೋಲಾಗಿ ಮತ್ತು ಸಾರ್ವಜನಿಕ ಹೊಣೆಗಾರಿಕೆಯನ್ನೂ ಹಾಳುಮಾಡಿತು.
PPP ವೈಫಲ್ಯದಿಂದ ಸಾರ್ವಜನಿಕ ನಿರ್ವಹಣೆಯ ಪುನಃಸ‌್ಥಾಪನೆಯೆಡೆಗೆ
ಅಪೋಲೊ ಆಸ್ಪತ್ರೆಗಳೊಂದಿಗೆ ಇದ್ದ PPP ಒಪ್ಪಂದವು 2012ರ ಜೂನ್‌ನಲ್ಲಿ ಮುಕ್ತಾಯವಾದ ನಂತರ, ಕರ್ನಾಟಕ ಸರ್ಕಾರ ಆ ಒಪ್ಪಂದವನ್ನು ನವೀಕರಿಸಲು ನಿರಾಕರಿಸಿತು. ಇದರ ಪರಿಣಾಮವಾಗಿ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಮುಚ್ಚಬೇಕಾಯಿತು. ಉನ್ನತ ತಂತ್ರಜ್ಞಾನದ ಸಾಧನಗಳು ನಿರುಪಯುಕ್ತವಾಗಿದ್ದವು. 285ಕ್ಕಿಂತ ಹೆಚ್ಚು ಸಿಬ್ಬಂದಿಯು 2012ರ ಜೂನ್‌ನಲ್ಲಿ “ಕಪ್ಪು ದಿನ” ಆಚರಿಸಿದರು. ಇದಾದ ನಂತರ 2013–14ರಲ್ಲಿ ಆಸ್ಪತ್ರೆಯ ಸಿಬ್ಬಂದಿ, ಆರೋಗ್ಯ ಇಲಾಖೆ ನೌಕರರು ಮತ್ತು ಸ್ಥಳೀಯ ಸಮುದಾಯದ ಸದಸ್ಯರಿಂದ ತೀವ್ರವಾದ ಚಳವಳಿ ನಡೆಯಿತು, ಇದು ಆಡಳಿತವನ್ನು ಸಾರ್ವಜನಿಕ ನಿರ್ವಹಣೆಯನ್ನು ಪುನಸ್ಥಾಪನೆಗೊಳಿಸಲು ಒತ್ತಾಯಿಸಿತು.
ಅಂತಿಮವಾಗಿ, 2015ರ ಏಪ್ರಿಲ್‌ನಲ್ಲಿ, ವೈದ್ಯಕೀಯ ಶಿಕ್ಷಣದ ರಾಜ್ಯ ಸಚಿವರು ಆಸ್ಪತ್ರೆಯನ್ನು ಸಂಪೂರ್ಣವಾಗಿ ಸಾರ್ವಜನಿಕ ನಿರ್ವಹಣೆಯಡಿಯಲ್ಲಿ ಪುನಃ ಉದ್ಘಾಟಿಸಿದರು ಮತ್ತು ಹೊಸ ಸೌಕರ್ಯಗಳನ್ನೂ ಉದ್ಘಾಟಿಸಿದರು. ಅಪೋಲೊ ಆಸ್ಪತ್ರೆಯಲ್ಲಿ ಹಿಂದೆ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಸರ್ಕಾರಿ ವೇತನ ಪಟ್ಟಿಗೆ ಸೇರಿಸಲಾಯಿತು ಮತ್ತು ಅವರ ಮಾಸಿಕ ವೇತನವನ್ನು ಕೂಡಾ ಗಣನೀಯವಾಗಿ ಹೆಚ್ಚಿಸಲಾಯಿತು.
ಸಂಕ್ಷಿಪ್ತವಾಗಿ ಹೇಳಬೇಕಾದರೆ, ರಾಯಚೂರಿನ ಆಸ್ಪತ್ರೆಯ PPP ಒಂದು ವಿಫಲತೆಯ ಮಾದರಿಯಾಗಿದೆ — ಬಳಕೆಯಾಗದ ಸಾಮರ್ಥ್ಯ, ಬಿಪಿಎಲ್ ರೋಗಿಗಳಿಗೆ ಸಮಾನವಲ್ಲದ ಪ್ರವೇಶ, ಪೂರೈಸದ ಸೇವಾ ಬದ್ಧತೆಗಳು ಮತ್ತು ಪಾರದರ್ಶಕತೆ ಇಲ್ಲದ ನಿರ್ವಹಣೆ. ರಾಯಚೂರಿನ ಈ ಬಹು-ಆಯಾಮಿಕ ವಿಫಲತೆಗಳು ಇಂತಹ PPP ಮಾದರಿಗಳಲ್ಲಿ ಅಡಕವಾಗಿರುವ ವಿಕೃತಿಗಳನ್ನು ತೋರಿಸುತ್ತವೆ. ಸಾರ್ವಜನಿಕ ನಿಯಂತ್ರಣದಡಿ ಆಸ್ಪತ್ರೆಯನ್ನು ಪುನಃ ತೆರೆಯುವ ಮತ್ತು ವಿಸ್ತರಿಸುವ ಈ ಅನುಭವವು, ಸಾರ್ವಜನಿಕ ಒತ್ತಡ ಮತ್ತು ಸಮುದಾಯ ಚಟುವಟಿಕೆಗಳಿಂದ ಹೇಗೆ ಆರೋಗ್ಯ ಸಂಸ್ಥೆಗಳನ್ನು ಖಾಸಗೀಕರಣದಿಂದ ಹಿಂದಕ್ಕೆ ಪಡೆಯಬಹುದು ಎಂಬುದಕ್ಕೆ ಸ್ಪಷ್ಟ ಪಾಠ ನೀಡುತ್ತದೆ.
(ಈ ಲೇಖನವು ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕದ ಕಾರ್ಯಕರ್ತರ ತಮ್ಮ ಸಂಯುಕ್ತ ಅನುಭವದಿಂದ ಬರೆದ ಲೇಖನದ ಆಧಾರಿತವಾಗಿದೆ. ಸಂಪಾದಕೀಯದಲ್ಲಿ ಪ್ರಸನ್ನ ಸಾಲಿಗ್ರಾಮ ಅವರು ಸಹಕರಿಸಿದ್ದಾರೆ).