ಕರ್ನಾಟಕದ ಜನತೆಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿ ಜನಾಂದೋಲನ

ಕಳೆದ ಹಲವಾರು ವರ್ಷಗಳಿಂದ, ಕರ್ನಾಟಕ ಸರ್ಕಾರಗಳು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಹೆಸರಿನಲ್ಲಿ ಜಿಲ್ಲಾಸ್ಪತ್ರೆಗಳನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸುವುದಾಗಿ ಪದೇ ಪದೇ ಘೋಷಣೆ ಮಾಡಿವೆ. 2022 ರಲ್ಲಿ, ಹಿಂದಿನ ರಾಜ್ಯ ಸರ್ಕಾರವು ಒಂಬತ್ತು ಜಿಲ್ಲಾಸ್ಪತ್ರೆಗಳನ್ನು PPP ಆಧಾರಿತ ಖಾಸಗೀಕರಣಕ್ಕೆ ಮುಂದಾಗಿತ್ತು. ಈ ನಿರ್ಧಾರಕ್ಕೆ ಜನರ ಭಾರೀ ವಿರೋಧ ಮತ್ತು ಪ್ರತಿಭಟನೆ ಇದ್ದು ಸರ್ಕಾರವು ಈ ನಿರ್ಧಾರವನ್ನು ಹಿಂಪಡೆಯಬೇಕಾಯಿತು. ಆದರೆ ಈಗಿನ ರಾಜ್ಯ ಸರ್ಕಾರವು 11 ಜಿಲ್ಲೆಗಳ ಜಿಲ್ಲಾಸ್ಪತ್ರೆಗಳನ್ನು ಖಾಸಗೀಕರಣಗೊಳಿಸಲು ಮತ್ತೆ PPP ಯೋಜನೆಗಳನ್ನು ಮುಂದಿಟ್ಟಿದೆ — ತುಮಕೂರು, ದಾವಣಗೆರೆ, ಚಿತ್ರದುರ್ಗ, ಬಾಗಲಕೋಟೆ, ಕೋಲಾರ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ವಿಜಯಪುರ, ವಿಜಯನಗರ ಮತ್ತು ರಾಮನಗರ. ಈ PPP ಮೂಲಕದ ಖಾಸಗೀಕರಣಕ್ಕೆ “ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕ” ನೇತೃತ್ವದ ವ್ಯಾಪಕ ಜನಾಂದೋಲನದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.